ಕನ್ನಡದಲ್ಲಿ ಬೇಟೆ ಸಾಹಿತ್ಯ

ಮಾನವನ ಬದುಕಿನೊಂದಿಗೆ ಹತ್ತಿರದ ಸಂಬಂಧ ಪಡೆದುಕೊಂಡಿದ್ದ, ಇತಿಹಾಸದುದ್ದಕ್ಕೂ ಏಳುಬೀಳುಗಳನ್ನು ಕಂಡ ಬೇಟೆ ಮಾನವನ ಸೃಜನಶೀಲ ಅಭಿವ್ಯಕ್ತಿಗಳಾದ ಕಲೆ, ಸಾಹಿತ್ಯ, ನೃತ್ಯ, ನಾಟಕ, ಸಂಗೀತ ಮೊದಲಾದವುಗಳೊಂದಿಗೆ ಸಹಭಾಗಿಯಾಗಿರುವುದು ಕುತೂಹಲದಾಯಕ ವಿಚಾರವಾಗಿದೆ.
	
ಬೇಟೆಯನ್ನು ಪ್ರಧಾನ ಅಥವಾ ಆನುಷಂಗಿಕವಾಗಿ ಒಳಗೊಂಡ ಬರೆಹಗಳನ್ನು ಮೃಗಯಾ ಸಾಹಿತ್ಯ ಎಂಬ ಸಾಹಿತ್ಯ ಪ್ರಕಾರವಾಗಿ ವಿಭಾಗಿಸಿ ಅಧ್ಯಯನ ಮಾಡಲಾಗುತ್ತದೆ. ಕನ್ನಡದ ಮೃಗಯಾ ಸಾಹಿತ್ಯ ವಿಶಾಲ ಅರ್ಥದಲ್ಲಿ ಬಹು ವ್ಯಾಪಕವಾಗಿದ್ದು ಕನ್ನಡದ ಮೊದಲ ಕೃತಿ ಕವಿರಾಜಮಾರ್ಗದಿಂದ ಇಂದಿನವರೆಗಿನ ಕಾಲಘಟ್ಟದ ವಿವಿಧ ಕೃತಿಗಳಲ್ಲಿ ದಾಖಲಾಗಿರುವುದು ಅಧ್ಯಯನ ಯೋಗ್ಯವಾಗಿದೆ.
	
ಹಿಂದಿನ ದೊರೆಗಳು ತಮ್ಮ ಪ್ರಜಾಪರಿಪಾಲನೆ ಕರ್ತವ್ಯದ ಅಂಗವಾಗಿಯೂ ಸಾಹಸ ಪ್ರದರ್ಶನ, ಮನರಂಜನೆಯ ಗೀಳಿನಲ್ಲಿಯೂ ಆಗಾಗ ವನ್ಯಜೀವಿಗಳ ಬೇಟೆಯಾಡುತ್ತಿದ್ದುದುಂಟು. ಕವಿಗಳಿಗೆ ಅಷ್ಟಾದಶವರ್ಣನೆಗಳಲ್ಲಿ ಬೇಟೆಯೂ ಒಂದು. ತಮ್ಮ ಕೃತಿಗಳಲ್ಲಿ ಬೇಟೆ ಪ್ರಸಂಗಗಳನ್ನು ಉತ್ಸುಕತೆಯಿಂದ ವರ್ಣಿಸುತ್ತಿದ್ದರು. ಆಧುನಿಕ ಸಂದರ್ಭದಲ್ಲಿ ಬಹುಮಟ್ಟಿಗೆ ಇಂಗ್ಲಿಷ್ ಸಾಹಿತ್ಯದಲ್ಲಿನ ಬೇಟೆ ಅನುಭವಗಳ ವರ್ಣರಂಜಿತ ನಿರೂಪಣೆಗಳ ಪ್ರೇರಣೆಗಳಿಂದ ಹೊಸಗನ್ನಡದಲ್ಲಿಯೂ ಪೂರ್ಣ ಪ್ರಮಾಣದ ಮೃಗಯಾ ಸಾಹಿತ್ಯ ಸೃಷ್ಟಿಯಾಗತೊಡಗಿತ್ತು.
	
ಕನ್ನಡ ಮೃಗಯಾ ಸಾಹಿತ್ಯದ ಕೃತಿಗಳನ್ನು ಅಧ್ಯಯನ ಸೌಲಭ್ಯಕ್ಕಾಗಿ ಪ್ರಧಾನವಾಗಿ ಎರಡು ಗುಂಪುಗಳಾಗಿ ವರ್ಗೀಕರಿಸಿ ಕೊಳ್ಳಬಹುದು:
	
I  ಪ್ರಾಚೀನ ಕೃತಿಗಳು	  II  ಆಧುನಿಕ ಕೃತಿಗಳು
	¯			      ¯
1 ಕಾವ್ಯ, ಪುರಾಣ, ನಾಟಕ	  1 ಬೇಟೆ ಅನುಭವಗಳ ನಿರೂಪಣೆ
	¯
2 ಶಾಸನಗಳು 		   ಕನ್ನಡಕೃತಿಗಳು  		ಅನುವಾದಗಳು		
3 ಚಾರಿತ್ರಿಕ ಬರೆಹಗಳು, 	   ಸ್ವಯಂನಿರೂಪಣೆ            ಅನ್ಯನಿರೂಪಣೆ
  ಪ್ರವಾಸ ಕಥನ,  
  ಪತ್ರವ್ಯವಹಾರಗಳು
4 ಜನಪದ ಸಾಹಿತ್ಯ	  	     2 ಬೇಟೆ ಅಧ್ಯಯನಗಳು

ಪ್ರಾಚೀನ ಕೃತಿಗಳು: 	ಕನ್ನಡದ ಪ್ರಾಚೀನ ಕವಿಗಳಲ್ಲಿ ಕೆಲವರಿಗೆ ಬೇಟೆ ಸ್ವಾನುಭವದ್ದಾಗಿರಬಹುದಾದರೂ ಕೆಲವರು ಇತರ ಕವಿಗಳಿಂದ ಪ್ರೇರಿತರಾಗಿ, ಅಷ್ಟಾದಶವರ್ಣನೆಗೆ ಕಟ್ಟುಬಿದ್ದು ಬೇಟೆ ವರ್ಣನೆಗೆ ಇಳಿದಂತೆ ಭಾಸವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಕರ್ನಾಟಕದ ವನ್ಯ ಪ್ರದೇಶದಲ್ಲಿ ಸಾಮಾನ್ಯವಾಗಿ ಇರದ ಸಿಂಹ ಅಥವಾ ಶರಭ, ಗಂಡಭೇರುಂಡಗಳಂತಹ ಕೇವಲ ಕವಿಸಮಯದ - ಪೌರಾಣಿಕ ಪ್ರಪಂಚದ - ವನ್ಯ ಮೃಗಗಳು ಸಹಜವಾಗಿ ಕಂಡಂತೆ ವರ್ಣಿತವಾಗಿವೆ.
	
ಜೈನ, ವೀರಶೈವ, ಬ್ರಾಹ್ಮಣ ಕವಿಗಳು ಸ್ವತಃ ಅಹಿಂಸಾ ಧರ್ಮ ಪಾಲಕರಾದರೂ ತಾವೂ ಸ್ವತಃ ಬೇಟೆಗಾರರಾಗಿದ್ದಂತೆ ಬೇಟೆಯ ವರ್ಣನೆಯಲ್ಲಿ ತೊಡಗಿರುವುದೂ ಚಿಂತನಾರ್ಹವಾಗಿದೆ. ಕಾವ್ಯ ಕರ್ಮಪಾಲನೆಯಲ್ಲಿ ಇದು ಅವರಿಗೆ ಅನಿವಾರ್ಯವಾದುದು ಆಗಿತ್ತು. ಯುದ್ಧದಂತೆ ಬೇಟೆಯಲ್ಲಿಯೂ ಇದ್ದಿರಬಹುದಾದ ವಿನಾಯಿತಿಯೂ ಈ ಮನೋಭಾವಕ್ಕೆ ಕಾರಣ ಆಗಿರಬಹುದು. ನಮ್ಮ ಕೆಲ ಕವಿಗಳು ಸವ್ಯಸಾಚಿ ಗಳಾಗಿದ್ದರೆಂಬುದೂ ಇಲ್ಲಿ ಸ್ಮರಣೀಯ. ಕನಕದಾಸರಂತಹ ಕವಿಗಳಿಗೆ ಬೇಟೆ ಸಹಜ ಅನುಭವವಾಗಿರಬಹುದು. ಶಿವತತ್ವಚಿಂತಾಮಣಿ ಬರೆದ ಲಕ್ಕಣ್ಣದಂಡೇಶನಿಗೆ ಗಜವೇಂಟೆಗಾರ ಎಂಬ ಬಿರುದು ಇದ್ದದ್ದೂ ಇಲ್ಲಿ ಉಲ್ಲೇಖನೀಯ.
	
ಇದೇ ಸಂದರ್ಭದಲ್ಲಿ ನಮ್ಮ ಪ್ರಾಚೀನ ಕಾವ್ಯಗಳ ಕಥಾವಿನ್ಯಾಸದ ಬಗೆಗೆ ಪ್ರಸ್ತಾಪಿಸುವುದು ಉಚಿತವಾಗಿದೆ. ಈ ಕಾವ್ಯಗಳ ಕಥಾಹಂದರ ಹೇಗಿರುತ್ತದೆ ಎಂದರೆ ಇವುಗಳ ಬಹುಪಾಲು ನಾಯಕರು ಕಥೆಯ ಆರಂಭದಲ್ಲಿಯೇ ಬೇಟೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮುಂದಿನ ಕತೆಗೆ ತಿರುವು ನೀಡುವ ಭೂಮಿಕೆಯಾಗಿಯೂ ಬೇಟೆ ಪ್ರಸಂಗ ಮಹತ್ವ ಪಡೆಯುತ್ತದೆ. ಇನ್ನೂ ವಿಶೇಷವೆಂದರೆ ಈ ಸಂದರ್ಭದ ಬೇಟೆಯಲ್ಲಿ ಕಥಾನಾಯಕ ಮಾಯಾವರಾಹವನ್ನು ಬೆನ್ನತ್ತಿ ಬೇಟೆಯಾಡಬೇಕಾಗುತ್ತದೆ. ಎಲ್ಲ ಕಾವ್ಯಗಳಲ್ಲಿ ವರಾಹವೇ ಪ್ರಧಾನವಾಗಿ ಕಾಣಿಸಿಕೊಳ್ಳುವುದು ಏಕೆ ಎಂಬುದು ಕುತೂಹಲದ ಪ್ರಶ್ನೆ. ವನ್ಯಜೀವಿಗಳಲ್ಲಿ ಕಾಡುಹಂದಿ ಅತ್ಯಂತ ಬಲಿಷವಿವಾದ, ಅದನ್ನು ಇರಿದುಕೊಲ್ಲುವುದು ಮಹಾಬಿಲ್ಗಾರನಿಗೂ ಸವಾಲಿನ ಕಾರ್ಯ ಎಂಬುದು ಇದರ ಮುಖ್ಯ ಕಾರಣ ಇದ್ದಿರಬಹುದು. ಹುಲಿ, ಸಿಂಹಗಳಿಗಿಂತಲೂ ಕಾಡುಹಂದಿಗಳ ಉಪಟಳ ಪರಿಸರದಲ್ಲಿ ಬಹು ವ್ಯಾಪಕವಾಗಿದ್ದಿರಬಹುದು.
	
ಪ್ರಾಚೀನ ಕವಿಗಳು ಬೇಟೆಗೆ ಸಂಬಂಧಿಸಿದ ಕೆಲವು ಸಾಮಾನ್ಯ ವಿಷಯಗಳನ್ನು ಅನಿವಾರ್ಯವಾಗಿ ಹೇಳಿದ್ದರೂ ಸಾಂದರ್ಭಿಕವಾಗಿ ಬಹುಮಟ್ಟಿಗೆ ಪ್ರತಿಯೊಬ್ಬರೂ ತಲಾ ಒಂದಾದರೂ ಹೊಸ ಹೊಸ ವಿಷಯಗಳನ್ನು ದಾಖಲಿಸುವತ್ತ ಗಮನಕೊಟ್ಟಿರುವುದೂ ಉಂಟು. ನಿದರ್ಶನಕ್ಕೆ ಮುಮ್ಮಡಿ ಕೃಷ್ಣರಾಜ ಒಡೆಯರು ತಮ್ಮ ಸೌಂಗಂಧಿಕಾ ಪರಿಣಯದಲ್ಲಿ ಬೇಟೆಯಲ್ಲಿ ಕುದುರೆಗಳು ಕೆನೆಯದಂತೆ ಅವುಗಳ ಬಾಯಿಗೆ ಕಟ್ಟು ಹಾಕುತ್ತಿದ್ದ ಬಗ್ಗೆ ಹೇಳಿದ್ದಾರೆ. ಬೇಟೆ ವಿಧಗಳ ಪ್ರಸ್ತಾಪವೂ ಅಲ್ಲಿ ಬಂದಿದೆ. ತಿರುಮಲಾರ್ಯನ ಚಿಕ್ಕದೇವರಾಜ ವಂಶಾಳಿಯಲ್ಲಿ ಬೇಟೆಯ ಹುಚ್ಚಿನಿಂದ ರಾಜನು ತನ್ನ ರಾಜ್ಯವನ್ನೇ ಕಳೆದುಕೊಳ್ಳುವ, ಬೇಟೆಯಲ್ಲಿ ಬಂದೂಕು ಬಳಸಿದ ವಿವರಗಳು ಪ್ರಸ್ತಾಪವಾಗಿವೆ. ವಿರೂಪಾಕ್ಷ ಪಂಡಿತನ ಚೆನ್ನಬಸವಪುರಾಣದಲ್ಲಿ ಪ್ರಾಣಿಗಳ ಮುಖವಾಡ ಧರಿಸಿ ಬೇಟೆಯಾಡುತ್ತಿದ್ದ ಅಪರೂಪದ ಮಾಹಿತಿ - ತಂತ್ರ ದಾಖಲಾಗಿವೆ.
	
ಪ್ರಾಚೀನ ಕವಿಗಳು ಬೇಟೆಯನ್ನು ನೆವ ಮಾಡಿಕೊಂಡು ವಿನೂತನ ಕಲ್ಪನೆ, ಚಮತ್ಕಾರದ ವರ್ಣನೆಗಳ ತಮ್ಮ ಪ್ರತಿಭಾ ಪ್ರದರ್ಶನದ ಮೂಲಕ ಕಾವ್ಯಾಸಕ್ತ ಸಹೃದಯರಿಗೆ ಮುದನೀಡಿರುವುದೂ ಉಂಟು. ಉದಾ: ಲಕ್ಷ್ಮೀಶನಲ್ಲಿ ಒಂದು ಚಮತ್ಕಾರದ ವರ್ಣನೆ ಹೀಗಿದೆ: ಬೇಡತಿಯೊಬ್ಬಳನ್ನು ಆನೆ ಎಂದು ತಿಳಿದ ಸಿಂಹವೊಂದು ಅವಳ ಮೇಲೆ ಬೀಳುವಾಗ, ಅವಳ ನಡುವನ್ನು ನೋಡಿ ಅದೊಂದು ಸಿಂಹವೆಂದು ಅರಿತು ಸುಮ್ಮನಾಗುವಾಗ, ಅವಳ ಕಣ್ಣುಗಳನ್ನು ನೋಡಿ ಅದು ಹರಿಣಿ ಎಂದು ತೀರ್ಮಾನಿಸಿ ಮತ್ತೆ ಅವಳ ಮೇಲೆ ಬಿದ್ದು ಹಿಡಿಯಲು ಎಳೆಸುತ್ತಿರುವಾಗ, ತೂರಿಬಂದ ಬೇಡನ ಬಾಣಕ್ಕೆ ತುತ್ತಾಗಿ ಪ್ರಾಣನೀಗುತ್ತದೆ. ಕನಕದಾಸರ ಮೋಹನ ತರಂಗಿಣಿಯಲ್ಲಿ ಬೇಟೆನಾಯಿಯೊಂದು ಪೂರ್ಣಚಂದ್ರನಲ್ಲಿನ ಮೊಲವನ್ನು ಕಂಡು ಮೊಗವೆತ್ತಿ ಬೊಗಳಿದ್ದು ಅತಿಶಯೋಕ್ತಿ ವರ್ಣನೆಯ ಇನ್ನೊಂದು ನಿದರ್ಶನವಾಗಿದೆ. ಹರಿಹರನ ಗಿರಿಜಾ ಕಲ್ಯಾಣದಲ್ಲಿ ಬೇಟೆಯಾಡಿದ ಬೇಡರ ಮೈಮೇಲಿನ ಗೀಚು ಗಾಯಗಳ ಗುರುತನ್ನು ಕಂಡ ಬೇಡತಿಯರು ಅವು ಅನ್ಯ ಪ್ರೇಯಸಿಯರೊಂದಿಗೆ ರತಿಸುಖದಲ್ಲಿ ಮಾಡಿಕೊಂಡ ಗಾಯಗಳೆಂದು ಜಗಳ ತೆಗೆದ ಸನ್ನಿವೇಶದ ಚಿತ್ರಣವಿದೆ. ಕವಿ ರುದ್ರಭಟ್ಟನ ಜಗನ್ನಾಥ ವಿಜಯದಲ್ಲಿ ನಿಜವಾಗಿಯೂ ಇನ್ನೊಬ್ಬಳೊಂದಿಗೆ ಕೂಡಿ ಸುಖಿಸಿದ ತರುಣ ಬೇಡನೊಬ್ಬ ಅದು ಹುಲಿಯ ಉಗುರಿನ ಗುರುತೆಂದು ತನ್ನ ಮಡದಿ ಭಾವಿಸಲೆಂದು ಒಂದು ಹುಲಿಯಮರಿಯನ್ನು ಕಂಕುಳಲ್ಲಿ ಇರುಕಿಕೊಂಡು ಬರುವ ಚಿತ್ರಣವಿದೆ. 
	
ಪಂಪನ ವಿಕ್ರಮಾರ್ಜುನ ವಿಜಯದ ಎರಡು ಸನ್ನಿವೇಶಗಳಲ್ಲಿ ಬೇಟೆಯ ವರ್ಣನೆ ಬಂದಿದೆ. ಬೇಟೆಗೆ ಬರುವಂತೆ ಅರ್ಜುನನನ್ನು ವನಪಾಲಕರು ವಿನಂತಿಸುವ ಸಂದರ್ಭ ಹಾಗೂ ಇನ್ನೊಂದು ಪ್ರಸಿದ್ಧ ಇಂದ್ರಕೀಲ ಪ್ರಸಂಗ (5ನೆಯ ಆಶ್ವಾಸ). ಇವುಗಳಲ್ಲಿ ಮೊದಲನೆಯದು ಲೌಕಿಕನೆಲೆಯ ಬೇಟೆಯಾದರೆ ಎರಡನೆಯದು ಕಿರಾತವೇಷದ ಶಿವ ಹಾಗೂ ಮಾಯಾವರಾಹಗಳಿಂದಾಗಿ ಅಲೌಕಿಕನೆಲೆಗೂ ಏರುತ್ತದೆ. ಧಾರ್ಮಿಕವಾಗಿ ಜೈನನಾದ ಈ ಕವಿ ಸ್ವತಃ ಅನುಭವಿ ಬೇಟೆಗಾರನೆಂಬಂತೆ ಬೇಟೆಯ ಪ್ರಯೋಜನ (ಇದರಲ್ಲಿ ಕಾಳಿದಾಸನ ಪ್ರಭಾವ ಇದ್ದಿರಬಹುದು), ಬೇಟೆಗಾರನ ಲಕ್ಷಣ, ಬೇಟೆನಾಯಿ, ಪೆರ್ವೇಂಟೆ, ಕಿರುವೇಂಟೆ, ದೀಪದ ಬೇಟೆ, ಹಂದಿ ಬೇಟೆಯ ತಂತ್ರ - ವಿವರ, ಬೇಟೆಗೆ ಸೂಕ್ತವಾದ ಕಾಲ ಮೊದಲಾದವುಗಳ ಬಗೆಗೆ ನೀಡಿರುವ ಮಾಹಿತಿಗಳು ಅಪೂರ್ವವಾಗಿವೆ. ಹಂದಿಗಳ ಗುಂಪಿನಲ್ಲಿ ಹೆಣ್ಣು ಹಂದಿ, ತೆನೆಹಂದಿ, ಕುರುಡು ಕುಂಟು ಹಂದಿಯಂಥವುಗಳನ್ನು ಸೂಕ್ಷ್ಮವಾಗಿ ಗುರುತಿಸಿ ಅವುಗಳನ್ನು ಕೊಲ್ಲದಂತೆ ಎಚ್ಚರವಹಿಸಬೇಕೆಂದು ಹೇಳಿರುವುದು ಪಂಪನ ಜೀವದಯೆಯೊಂದಿಗೆ ಪರಿಸರದ ಅರಿವಿನ ಪ್ರತೀಕವೂ ಆಗಿದೆ.
	
ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ಹರಿಶ್ಚಂದ್ರನ ಬಾಳಿನಲ್ಲಿ ಒಂದು ಮಹತ್ತರ ತಿರುವು ತರುವುದರ ಸಂಕೇತವಾಗಿ ಬೇಟೆ ಪ್ರಸಂಗ ಒದಗಿಬರುತ್ತದೆ. ಆವರೆಗೂ ದೊರೆ ಪ್ರಜೆಗಳ ರಕ್ಷಣೆಗೆ ವನ್ಯಮೃಗಗಳ ಬೇಟೆಯಾಡುವವನಾದರೆ ಅಂದಿನಿಂದ ವಿಶ್ವಾಮಿತ್ರ ಹರಿಶ್ಚಂದ್ರನನ್ನು (ಆತನ ಕುಟುಂಬವನ್ನು) ಬೇಟೆ ಆಡುವುದು ಪರೋಕ್ಷವಾಗಿ ಚಿತ್ರಿತವಾಗಿದೆ. ಇಂತಹ ಒಂದು ಬಹುಮುಖ್ಯ ಪ್ರಸಂಗವನ್ನು ಕವಿ ಸಾಕಷ್ಟು ವಿಸ್ತಾರವಾಗಿ, ಪರಿಣಾಮಕಾರಿಯಾಗಿ ವರ್ಣಿಸಿದ್ದಾನೆ. ಈ ಸಂದರ್ಭದಲ್ಲಿ ಆತ ತಡಿಕೆವಲೆ, ತಟ್ಟಿವಲೆ, ಹಾಸುವಲೆ, ಬೀಸುವಲೆ ಮೊದಲಾದ 24 ಬಗೆಯ ಬಲೆಗಳು, ಕೋರವ, ಸೀಗಡಿ, ಗೆಂಡೆ ಮೊದಲಾದ ವಿವಿಧ ಜಾತಿ ಮೀನುಗಳು, ದೀಪದ ಬೇಟೆ, ದಿಗ್‍ಬಂಧನ ಬೇಟೆ, ಗೋರಿಬೇಟೆ, ಪಳಹರದ ಬೇಟೆ, ಪಟಬೇಟೆ, ಚಿತ್ರಬೇಟೆ ಮೊದಲಾದ ಎಂಟು ರೀತಿಯ ಬೇಟೆಗಳು, ಕಿರಾತರ ವೃತ್ತಿ ನೈಪುಣ್ಯ, ಬುತ್ತಿಗಂಟನ್ನು ಬೆನ್ನಿಗೆ ಕಟ್ಟಿಕೊಂಡು ಹೋಗುತ್ತಿದ್ದ ಬೇಡರು ಮೊದಲಾದ ಕುತೂಹಲಕರ ವಿವರಗಳನ್ನು ದಾಖಲಿಸಿದ್ದಾನೆ.
	
ಕುದುರೆ ಮೇಲೇರಿ ಬೇಟೆಯಾಡುವುದನ್ನು ಅಶ್ವಿನಾ ಎಂದು ಕರೆಯುತ್ತಿದ್ದುದು ಸೌಗಂಧಿಕಾ ಪರಿಣಯದಿಂದ ತಿಳಿದುಬರುತ್ತದೆ. ಹೀಗೆ ಕುದುರೆ ಮೇಲೆ ಕುಳಿತು ದೊರೆಯು ಹಂದಿ ಬೇಟೆಯಾಡಿದ ಪ್ರಸ್ತಾಪ ವಡ್ಡಾರಾಧನೆಯ ಚಿತಲಾಪುತ್ರ ಕತೆಯಲ್ಲಿಯೂ ಬರುತ್ತದೆ. ಮುಂದೆ ನಳಚರಿತ್ರೆಯಲ್ಲಿಯೂ ನಳರಾಜನು ಕುದುರೆ ಮೇಲೆ ಕುಳಿತು ಬೇಟೆಗೆ ಹೊರಟಿದ್ದಾಗಿ ಕವಿ ಚಿತ್ರಿಸಿದ್ದಾನೆ. ಮೋಹನ ತರಂಗಿಣಿಯಲ್ಲಿ ಬೇಟೆಯ ಆಯಾಸ ಪರಿಹಾರಕ್ಕಾಗಿ ಕೊನೆಯಲ್ಲಿ ಬೇಡ ಬೇಡತಿಯರು ಸಾಂಪ್ರದಾಯಿಕ ನೃತ್ಯಮಾಡಿದ್ದೂ ವರ್ಣಿತವಾಗಿದೆ. ಚೌಂಡರಸ ತನ್ನ ದಶಕುಮಾರ ಚರಿತೆಯಲ್ಲಿ ಬೇಟೆ ಬಳಿಕ ತಮ್ಮ ಬೀಡಿನಲ್ಲಿ ಬೇಡರು ಯಾವ ಯಾವ ಚಟುವಟಿಕೆಗಳಲ್ಲಿ ತೊಡಗಿರುತ್ತಿದ್ದರೆಂಬುದನ್ನು ಚಿತ್ರಿದ್ದಾನೆ. ಬೇಟೆ ಕೈಗೂಡಲೆಂದು ಜೀವಬಲಿ ನೀಡುತ್ತಿದ್ದ ಸಂಪ್ರದಾಯವನ್ನು ಈ ಕವಿ ದಾಖಲಿಸಿರುವುದು ಗಮನಾರ್ಹವಾಗಿದೆ. ನಂಜುಂಡ ಕವಿ ತನ್ನ ರಾಮನಾಥ ಚರಿತೆಯಲ್ಲಿ ಬೇಟೆಯಲ್ಲಿ ಆದ ಗಾಯಗಳಿಗೆ ಬೇಡತಿಯರು ತಾಂಬೂಲದ ಕಟ್ಟು ಹಾಕುತ್ತಿದ್ದ ವಿಷಯವನ್ನು ದಾಖಲಿಸಿದ್ದು ಜನಪದ ವೈದ್ಯಪದ್ಧತಿಯ ಅಭ್ಯಾಸ ದೃಷ್ಟಿಯಿಂದಲೂ ಉಲ್ಲೇಖನೀಯವಾಗಿದೆ.
	
ಷಡಕ್ಷರ ಕವಿಯ ರಾಜಶೇಖರ ವಿಳಾಸ ಹಾಗೂ ಶಬರಶಂಕರ ವಿಳಾಸ ಕಾವ್ಯಗಳಲ್ಲಿಯೂ ಬೇಟೆ ಪ್ರಸಂಗ ಕಥಾಭಾಗವಾಗಿ ನಿರೂಪಿತವಾಗಿವೆ. ಕವಿ ಆ ಕಾಲದ ಕೆಲವು ಬೇಟೆ ತಂತ್ರಗಳ ಬಗೆಗೆ ಹೇಳುತ್ತಾನೆ. ಶಬರಶಂಕರ ವಿಳಾಸದಲ್ಲಿ ಭ್ರಾಂತಿಯನ್ನುಂಟುಮಾಡುವ ದೀಪದ ತಂತ್ರ ಬಹುಶಃ ಪಂಪ ಉಲ್ಲೇಖಿಸಿರುವ ದೀಪದ ಬೇಟೆಯೇ ಆಗಿರುವ ಸಾಧ್ಯತೆ ಇದೆ. ಆದರೆ ಆತ ಹೇಳಿರುವ ಇನ್ನೊಂದು ಬೇಟೆ ತಂತ್ರ ಮಂಕುಬೂದಿ ಎರಚಿ ಪ್ರಾಣಿಗಳನ್ನು ಸೆರೆ ಹಿಡಿಯುವುದು ಇತರರಿಂದ ಅಷ್ಟಾಗಿ ಉಲ್ಲೇಖಗೊಳ್ಳದ ವಿಶಿಷ್ಟ ತಂತ್ರವಾಗಿ ಕಂಡುಬರುತ್ತದೆ. ಇದೇ ಕವಿಯ ವೃಷಭೇಂದ್ರ ವಿಜಯದ ಶರಣ ಕಥಾ ವಿಜಯ ಭಾಗದಲ್ಲಿ ಅಂಟು ಬಲೆಯ ಪ್ರಸ್ತಾಪವೂ ಬಂದಿದೆ. ವೀರ, ಶೃಂಗಾರ, ಹಾಸ್ಯರಸಗಳ ನಿರೂಪಣೆಗೆ ಕವಿ ಬೇಟೆ ಪ್ರಸಂಗವನ್ನು ಒಂದು ಒಳ್ಳೆಯ ಅವಕಾಶವಾಗಿ ಬಳಸಿಕೊಂಡಿದ್ದರೂ ಆತ ಅಷ್ಟಕ್ಕೇ ಸಂಭ್ರಮಿತವಾಗದೆ ಬೇಟೆ ಒಂದು ಪಾಪಕೃತ್ಯ ಎಂದು ಖಂಡಿಸುವಲ್ಲಿ ಮೊದಲಿಗನಾಗಿರುವುದೂ ಇಲ್ಲಿ ವಿಶೇಷ ಉಲ್ಲೇಖನೀಯ ಅಂಶವಾಗಿದೆ.
	
ಕುಮಾರವಾಲ್ಮೀಕಿಯ ತೊರವೆ ರಾಮಯಣದಲ್ಲಿ ಶಂಭಕಾಸುರನ ವಧೆಗಾಗಿ ಸ್ವತಃ ದೇವತೆಗಳೇ ಕಿರಾತರ ವೇಷಧರಿಸಿ ಬೇಟೆಗೆ ಬರುತ್ತಾರೆ. ಕರ್ಣಪಾರ್ಯನ ನೇಮಿನಾಥ ಪುರಾಣದಲ್ಲಿ ಕಿರಾತ ದಂಪತಿಗಳು ದಿಗಂಬರ ಯತಿಗಳನ್ನು ಅಪೂರ್ವಮೃಗವೆಂದು ತಿಳಿದು ಬೇಟೆಗೆ ಮುಂದಾದ ಅನಂತರ ಧರ್ಮಬೋಧೆ ಪಡೆದು ಪರಿವರ್ತಿತರಾದ ಕಥೆ ಬರುತ್ತದೆ. ನಂಜುಂಡಕವಿಯ ರಾಮನಾಥ ಚರಿತೆ, ಲಕ್ಷ್ಮೀಶನ ಜೈಮಿನಿ ಭಾರತ, ಜನ್ನನ ಯಶೋಧರ ಚರಿತೆ ಮತ್ತು ಅನಂತನಾಥ ಪುರಾಣ, ತಿರುಮಲಾರ್ಯನ ಚಿಕ್ಕದೇವರಾಜ ವಂಶಾವಳಿ, ಹರಿಹರನ ಗಿರಿಜಾಕಲ್ಯಾಣ, ದೇಪರಾಜನ ಸೊಬಗಿನ ಸೋನೆ, ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣ, ಬಾಹುಬಲಿ ಪಂಡಿತನ ಧರ್ಮನಾಥ ಪುರಾಣ, ಮಲ್ಲಿಕಾರ್ಜುನನ ಸೂಕ್ತಿ ಸುಧಾರ್ಣವ, ಗೋವಿಂದ ಕವಿಯ ನಂದಿಮಹಾತ್ಮ, ನೇಮಿಚಂದ್ರನ ಲೀಲಾವತೀ ಮಹಾಪ್ರಬಂಧ, ಕುಮಾರವ್ಯಾಸನ ಕರ್ನಾಟಕ ಭಾರತ ಕಥಾಮಂಜರಿ, ನಾಗವರ್ಮನ ಕರ್ನಾಟಕ ಕಾದಂಬರಿ, ಪರ್ವತೇಶನ ಚತುರಾಚಾರ್ಯ ಚಾರಿತ್ರ, ಪಾಯಣ್ಣನ ಸಮ್ಯಕ್ತ್ವ ಕೌಮುದಿ, ಪದ್ಮನಾಭನ ಜಿನದತ್ತ ಚರಿತೆ, ಮಲ್ಲಿಕಾರ್ಜುನನ ತೋಂಟದಾರ್ಯನ ಸಾಂಗತ್ಯ ಮುಂತಾದ ಕಾವ್ಯಗಳಲ್ಲಿ ಬೇಟೆ ಪ್ರಸ್ತಾಪಿತವಾಗಿರುವುದನ್ನೂ ವರ್ಣಿತವಾಗಿರುವುದನ್ನೂ ಗಮನಿಸಬಹುದಾಗಿದೆ.
ಕಾವ್ಯ, ಪುರಾಣ, ನಾಟಕಗಳು: ಪುರಾಣ ಪ್ರಸಂಗಗಗಳನ್ನು ಆಧರಿಸಿ ರಚಿತವಾದ ಪೌರಾಣಿಕ ನಾಟಕಗಳಲ್ಲಿಯೂ ಬಹುಮಟ್ಟಿಗೆ ಬೇಟೆ ಒಂದು ಮುಖ್ಯ ಪ್ರಸಂಗವಾಗಿ ಬರುತ್ತದೆ. ದುಷ್ಯಂತನು ಶಕುಂತಲೆಯನ್ನು ಮೋಹಿಸಿ ವರಿಸುವುದೇ ಆತ ಬೇಟೆಗೆಂದು ಜಿಂಕೆಯೊಂದರ ಬೆನ್ನು ಹತ್ತಿ ಬಂದಾಗ. ನಮ್ಮ ಗ್ರಾಮೀಣರಲ್ಲಿ ಜನಪ್ರಿಯ ನಾಟಕಗಳಾದ ರಾಜಾಹರಿಶ್ಚಂದ್ರ, ನಳದಮಯಂತಿ ಅಥವಾ ನಳಚರಿತ್ರೆಯಂತಹ ನಾಟಕಗಳಲ್ಲಿಯೂ ಬೇಟೆ ಮುಖ್ಯ ಸಂದರ್ಭವಾಗಿದೆ. ಹಾವಳಿ ಮಾಡುತ್ತಿದ್ದ ವನ್ಯಜೀವಿಗಳ ನಿಯಂತ್ರಣಕ್ಕೆಂದು ವನಪಾಲಕರ ಕೋರಿಕೆಯಂತೆ ರಾಜ ಬೇಟೆಗೆ ಹೋದಾಗ ಎದುರಾಗುವ ಹಂದಿಯನ್ನು ಅಡ್ಡಹಾಕಿ ನಿಲ್ಲಲೆ ನಿಲ್ಲಲೆ, ಎಲ್ಲಿಗೆ ಪೋಗುವೆ! ಹಂದಿಯೆ ನಿನ್ನಯ, ಹಲ್ಲನು ಮುರಿಯುವೆ ಎಂಬಂತಹ ಹಾಡನ್ನು ಸೂಕ್ತ ರಾಗ ಮಟ್ಟಿನಲ್ಲಿ ಹಾಡುವುದನ್ನು ಸಾಮಾನ್ಯವಾಗಿ ಕೇಳುತ್ತೇವೆ. ಬೇಟೆಗೆ ಹೊರಡುವಾಗ ಬೇಟೆಗಾರರು ಬೇಟೆದೇವರು ಮಾಡುವುದು, ಆಗ ನಡೆಯುವ ವಿನೋದ ದೃಶ್ಯಗಳೂ ಪ್ರೇಕ್ಷಕರಲ್ಲಿ ಹಾಸ್ಯರಸಾನುಭವ ಉದ್ದೀಪಿಸುವಲ್ಲಿ ಯಶಸ್ವಿಯಾಗುವುದರೊಂದಿಗೆ ನಮ್ಮ ಗ್ರಾಮೀಣ ಜನರ ನಂಬಿಕೆ, ಸಂಪ್ರದಾಯ, ಸಾಮಾಜಿಕ ಬದುಕಿನ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಮಾಡುತ್ತವೆ.
ಶಾಸನಗಳು: ಸಮಾಜದ ಹಿತಕ್ಕಾಗಿ ಹೋರಾಡಿ ಪ್ರಾಣತ್ಯಾಗಮಾಡಿದ ಅಥವಾ ಗೆದ್ದು ಸಾಹಸ ತೋರಿದ ವೀರರ ಸ್ಮರಣಾರ್ಥ ಶಾಸನ ಹಾಗೂ ವೀರಗಲ್ಲುಗಳನ್ನು ಗೆಯ್ಯಿಸುತ್ತಿದ್ದುದು ನಮ್ಮಲ್ಲಿ ವ್ಯಾಪಕವಾಗಿದ್ದ ಒಂದು ಪರಂಪರೆ. ಇಂಥ ವೀರರಲ್ಲಿ ಕ್ರೂರಪ್ರಾಣಿಗಳೊಂದಿಗೆ ಹೋರಾಡಿದ ಬೇಟೆಗಾರರೂ ಅವರ ನೆಚ್ಚಿನ ಬೇಟೆ ನಾಯಿಗಳೂ ಸೇರಿದ್ದು ಅಂಥ ಬೇಟೆಗಾರರ ಮತ್ತು ನಾಯಿಗಳ ನೆನಪಿಗಾಗಿಯೂ ಸ್ಮಾರಕಶಿಲೆ ನೆಡಿಸುತ್ತಿದ್ದುದುಂಟು. ಪ್ರಖ್ಯಾತವಾದ ಆತಕೂರಿನ ವೀರಗಲ್ಲಿನಲ್ಲಿ ಮಣಾಲನೆಂಬುವನು ತನ್ನ ಪ್ರೀತಿಪಾತ್ರವಾದ ಕಾಳಿ ಎಂಬ ನಾಯಿ ಬಲಶಾಲಿ ಹಂದಿಯೊಂದನ್ನು ಕೊಂದು ತಾನೂ ಸತ್ತದ್ದರ ನೆನಪಿಗಾಗಿ ಆ ವೀರಗಲ್ಲು ನೆಡಿಸಿದ ಕಥೆ ನಿರೂಪಿತವಾಗಿದೆ. ಲೋಕ ಮತ್ತು ದಳಗ ಎಂಬ ತನ್ನ ಎರಡೂ ನಾಯಿಗಳು ಬೇಟೆಯಲ್ಲಿ ಪ್ರಾಣಿಯೊಂದಿಗೆ ಹೋರಾಡಿ ಸತ್ತದ್ದರ ನೆನಪಿಗೆ ಪಿರಿಸಿಂದಿ ಎಂಬಾತ 975ರಲ್ಲಿ ವೀರಗಲ್ಲೊಂದನ್ನು ನೆಡಿಸಿದ. ರಾಷ್ಟ್ರಕೂಟ ಅರಸ ಮುಮ್ಮಡಿ ಗೋವಿಂದ ಬೇಟೆಗಾಗಿ ಹಂದಿ ಮೇಯಿಸಿದ್ದ ಸಂಗತಿ 804ರ ತಾಮ್ರಶಾಸನದಿಂದ ತಿಳಿದುಬರುತ್ತದೆ. ತಮ್ಮ ಗಾವುಣ್ಡ ಎಂಬಾತ ಹುಲಿಯೊಂದಿಗೆ ಹೋರಾಡಿ, ಅದನ್ನು ಕೊಂದು ತಾನೂ ಜೀವ ಬಿಟ್ಟಾಗ, ಅವನ ಸಾಹಸ ಮೆಚ್ಚಿ ಗಂಗ ಪೆರ್ಮಾಡಿ ಭೂಮಿಯನ್ನು ಉಂಬಳಿ ಬಿಟ್ಟಿದ್ದಕ್ಕೆ ವೀರಗಲ್ಲು ಸಾಕ್ಷಿಯಾಗಿದೆ. ಕೊಡಗಿನ ದೊರೆ ಲಿಂಗರಾಜೇಂದ್ರ ಒಡೆಯನ ಕಾಲದ ಒಂದು ಹುಕುಂನಾಮೆ (ಸರ್ಕಾರದ ಆe್ಞÉ)  ಪ್ರಕಾರ ಆ ಕಾಲದಲ್ಲಿ ಜನರು ನಿಗದಿ ಪಡಿಸಿದ ಒಂದು ದಿನ ಅರಮನೆಯ ಬಿಟ್ಟಿ ಕೆಲಸವಾಗಿ ಬೇಟೆಗೆ ಹೋಗಬೇಕಾದುದು ಕಡ್ಡಾಯವಾಗಿತ್ತು. ಇಂಥ ವೀರಗಲ್ಲು, ಶಾಸನ ಹಾಗೂ ಹುಕುಂನಾಮಗಳು ಕನ್ನಡ ನಾಡಿನಲ್ಲಿ ಅಸಂಖ್ಯವಾಗಿವೆ.

ಚಾರಿತ್ರಿಕ ಬರೆಹಗಳು, ಪ್ರವಾಸ, ಕಥನ, ಪತ್ರ ವ್ಯವಹಾರಗಳು: ಭಾರತಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರು ಬರೆದ ಪ್ರವಾಸ ಕಥನಗಳು, ರಾಜರ ಆಸ್ಥಾನದಲ್ಲಿದ್ದ ಕವಿಗಳು, ಕಲಾವಿದರು, ಅಧಿಕಾರಿಗಳು ಮತ್ತಿತರರು ನಡೆಸಿದ ಪತ್ರವ್ಯವಹಾರಗಳು ಮತ್ತಿತರ ಚಾರಿತ್ರಿಕ ದಾಖಲೆಗಳಲ್ಲಿಯೂ ಬೇಟೆಗೆ ಸಂಬಂಧಿಸಿದ ಅನೇಕ ಸಂಗತಿಗಳ ಪ್ರಸ್ತಾಪವಾಗಿರುವುದು ಅಧ್ಯಯನ ಯೋಗ್ಯವಾಗಿವೆ. ವಿಜಯನಗರಕ್ಕೆ ಭೇಟಿ ನೀಡಿದ್ದ (1441) ಅಬ್ದುಲ್ ರಜಾಕ್ ಎಂಬ ಪ್ರವಾಸಿ ಆಗ ಆನೆಗಳನ್ನು ಹಿಡಿಯುತ್ತಿದ್ದ ಕ್ರಮದ ಬಗ್ಗೆ ಬರೆದಿದ್ದಾನೆ. ಮೊಗಲರ ಕಾಲದ ಅನೇಕ ಚಿಕಣಿ ಚಿತ್ರಗಳಲ್ಲಿ ಆನೆ ಇತ್ಯಾದಿಗಳನ್ನು ಸುಲ್ತಾನರು ಬೇಟೆಯಾಡುತ್ತಿದ್ದ ಪ್ರಸಂಗಗಳು ಯಥಾವತ್ತು ಎಂಬಂತೆ ಆ ಕಾಲದ ಕಲಾವಿದರಿಂದ ಚಿತ್ರಕತವಾಗಿವೆ. ಕೊಡಗಿನ ಅರಸ ಚಿಕ್ಕವೀರರಾಜೇಂದ್ರನ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲು ಬಂದಿದ್ದ ಜಾಫರ್‍ಸನ್ ಎಂಬ ವೈದ್ಯ, ಆ ಬಳಿಕ ದೊರೆಯೊಂದಿಗೆ ಕೊಡಗಿನ ಕಾಡುಗಳಲ್ಲಿ ಬೇಟೆಯಾಡಿದ ಬಗೆಗೆ, ದೊರೆಯ ಬೇಟೆ ಸಾಹಸ, ಲೈಟುಶಿಕಾರಿ ಇತ್ಯಾದಿಗಳ ಬಗೆಗೆ ತನ್ನ ಗೆಳೆಯನಿಗೆ ಬರೆದ ಪತ್ರದಲ್ಲಿ ವಿವರವಾಗಿ ದಾಖಲಿಸಿದ್ದು ಐತಿಹಾಸಿಕ ಮಹತ್ವದ ಬೇಟೆ ಕುರಿತ ದಾಖಲೆಯಾಗಿದೆ.
ಜನಪದ ಸಾಹಿತ್ಯ: ಬೇಟೆಯೊಂದಿಗೆ ನೇರ ಅನುಭವವುಳ್ಳ ನಮ್ಮ ಗ್ರಾಮೀಣರು ಜನಪದ ಕಥೆ, ಕಾವ್ಯ, ಗಾದೆ ಮೊದಲಾದ ಅಭಿವ್ಯಕ್ತಿ ಪ್ರಕಾರಗಳಲ್ಲಿ ಬೇಟೆ ಕುರಿತ ಅನೇಕ ಸಂಗತಿಗಳನ್ನು ದಾಖಲಿಸಿರುವುದು ಗಮನಿಸುವಂಥದ್ದು. ಕಥಾನಾಯಕನು ಮಹಾವೀರ, ಸಾಹಸಿ ಎಂಬುದನ್ನು ಮನವರಿಕೆ ಮಾಡಿಕೊಡಲು ಆತ ಹುಲಿ ಬೇಟೆಯಾಡಿದಂತೆ ಚಿತ್ರಿತವಾಗುವುದು ಕೆಲ ಕಥನಗೀತೆ/ಲಾವಣಿಗಳಲ್ಲಿ ಕಂಡುಬರುತ್ತದೆ. ಮಲೆಮಾದೇಶ್ವರನಂಥ ಆಧ್ಯಾತ್ಮಿಕ/ದೈವೀಶಕ್ತಿಯನ್ನು ತೋರ್ಪಡಿಸಲು ಆತ ಹುಲಿ ಏರಿಬರುವಂತೆ ಕಲ್ಪಿಸಲಾಗಿದೆ. ಬೇಟೆಗೆಂದು ಕಾಡಿಗೆ ಹೋದ ದೊರೆ ಅಲ್ಲಿ ಕಥಾನಾಯಕಿಯನ್ನು ಕಂಡು, ಅವಳನ್ನು ಅರಮನೆಗೆ ಕರೆತಂದು ವಿವಾಹವಾದ ಪ್ರಸಂಗಗಳು ಕೆಲವು ಕಥೆಗಳಲ್ಲಿ ಬರುತ್ತವೆ. ಬೇಟೆಯ ಸಂದರ್ಭದಲ್ಲಿ ಉತ್ಸಾಹ ಪ್ರಚೋದನೆಗಾಗಿ ಹಾಡುವ  ಬೇಟೆ ಹಾಡುಗಳೂ ಇವೆ. ಬೇಟೆಯ ನಿರ್ದಯತೆಯನ್ನೂ ಅಮಾನವೀಯತೆಯನ್ನೂ ಟೀಕಿಸುವಂತಹ ಬಿಡಿಗೀತೆಗಳೂ ಜನಪದ ಸಾಹಿತ್ಯದಲ್ಲಿ ಕಂಡುಬರುತ್ತವೆ.
	
ಜನಪದ ಸಾಹಿತ್ಯ, ಸಂಪ್ರದಾಯಗಳ ಬಹುಮುಖತೆಯನ್ನು ಅದರ ಪರಂಪರೆ - ಪ್ರಸ್ತುತತೆಯನ್ನು ಅಧ್ಯಯನ ಮಾಡುವ, ದಾಖಲಿಸುವ ದೃಷ್ಟಿಯಿಂದ ಕೆಲವಾರು ಜಾನಪದ ಅಧ್ಯಯನಾಸಕ್ತರು ಬೇಟೆ ಕುರಿತ ಹಾಡು-ಆಚರಣೆ-ಸಂಪ್ರದಾಯ ಇತ್ಯಾದಿಗಳನ್ನು ಕ್ಷೇತ್ರಕಾರ್ಯದ ಮೂಲಕ ಅಭ್ಯಾಸಮಾಡಿ ಲೇಖನಗಳನ್ನೂ ಅಧ್ಯಯನ ಗ್ರಂಥಗಳನ್ನೂ ರಚಿಸಿರುವುದು ಗಮನಾರ್ಹವಾಗಿದೆ.

ಆಧುನಿಕ ಕೃತಿಗಳು: ಬೇಟೆಯನ್ನೇ ಕೇಂದ್ರವಾಗಿಟ್ಟುಕೊಂಡು ತಮ್ಮ ಅನುಭವಗಳು, ವಿವರಗಳು ಹಾಗೂ ಆಶಯಗಳನ್ನು ದಾಖಲಿಸುವ ಮತ್ತು ಅಭಿವ್ಯಕ್ತಿಸುವ ಪ್ರಯತ್ನಗಳು ಆಧುನಿಕ ಸಂದರ್ಭದಲ್ಲಿ ವಿಶೇಷವಾಗಿ ನಡೆದಿರುವುದು ಬದುಕಿನಲ್ಲಿ ಬೇಟೆ ಹೇಗೆ ವ್ಯಾಪಕ ಸಂಬಂಧವನ್ನು ಪಡೆದಿತ್ತು ಎಂಬುದರ ನಿದರ್ಶನವಾಗಿದೆ. ಇಂಗ್ಲಿಷ್ ಸಾಹಿತ್ಯಾಧ್ಯಯನದಿಂದ ವಿಶೇಷವಾಗಿ ನಮ್ಮಲ್ಲಿದ್ದ ಕೆಲವರು ಆಂಗ್ಲರು ಪ್ರಕಟಿಸಿದ ತಮ್ಮ ರೋಮಾಂಚಕ ಬೇಟೆ ಅನುಭವ ಕಥನಗಳಿಂದ ಪ್ರೇರಿತರಾದ ಕನ್ನಡಿಗ ಬೇಟೆಗಾರರೂ ತಮ್ಮ ಅನುಭವಗಳಿಗೆ ಶಬ್ದರೂಪ ಕೊಡಲು ಮುಂದಾದದ್ದು ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೊಸಬಗೆಯ ಮೃಗಯಾ ಸಾಹಿತ್ಯ ನಿರ್ಮಾಣಕ್ಕೆ ಕಾರಣವಾಯಿತೆನ್ನಬಹುದು. ಇವರಲ್ಲಿ ಅಕ್ಷರಸ್ಥ ಬೇಟೆಗಾರರು ತಮ್ಮ ಅನುಭವ ಕಥನಗಳನ್ನು ಸ್ವಯಂ ನಿರೂಪಿಸಿದರೆ, ಬರೆಹ ಸಾಧ್ಯವಾಗದವರು ಇತರರಿಗೆ ಹೇಳಿ ಅಥವಾ ಆಸಕ್ತ ಲೇಖಕರು ಅಂತಹವರ ಅನುಭವ ಕೇಳಿ ಅವುಗಳಿಗೆ ಸಾಹಿತ್ಯಕ ನಿರೂಪಣೆ ನೀಡಿದ್ದು ನಡೆದಿದೆ. ಇನ್ನು ಕೆಲವರು ಇಂಗ್ಲಿಷ್‍ನಲ್ಲಿದ್ದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಆಂಗ್ಲರ ಬೇಟೆಯ ಅನುಭವಗಳನ್ನು ಕನ್ನಡಿಗರಿಗೆ ಪರಿಚಯ ಮಾಡಿಕೊಡುವ ಕಾರ್ಯಮಾಡಿದ್ದೂ ಇದೆ.
	
ಜಿಮ್‍ಕಾರ್ಬೆಟ್, ಕೆನ್ನೆತ್ ಅಂಡರ್ಸನ್ ಮೊದಲಾದವರು ಮಾನವೀಯ ದೃಷ್ಟಿ ಮತ್ತು ಪರಿಸರ ಕಾಳಜಿಗಳಿಂದ ನರಭಕ್ಷಕ ಮೃಗಗಳನ್ನು ಮಾತ್ರ ಕೊಲ್ಲುವ ತತ್ತ್ವಕ್ಕೆ ಬದ್ಧರಾದ ನಿಪುಣ ಬೇಟೆಗಾರರಾಗಿದ್ದು ಅವರು ತಮ್ಮ ನೂರಾರು ಬೇಟೆ ಅನುಭವಗಳನ್ನು ಪುಸ್ತಕಗಳ ರೂಪದಲ್ಲಿ ಪ್ರಕಟಿಸಿದ್ದಾರೆ. ಅವುಗಳಲ್ಲಿ ಬಹಳಷ್ಟು ಕನ್ನಡಕ್ಕೂ ಅನುವಾದಗೊಂಡಿವೆ. ಬಿ.ಈಶ್ವರ ಭಟ್ ಅವರು 1962 ರಷ್ಟು ಹಿಂದೆಯೇ ಅಂಡರ್ಸನ್‍ನ ಶಿವನಿಪಳ್ಳಿಯ ಕಪ್ಪು ಚಿರತೆ - ಕೃತಿಯ ಮೊದಲ ಐದು ಅಧ್ಯಾಯಗಳನ್ನು ಕನ್ನಡಕ್ಕೆ ತಂದಿದ್ದಾರೆ. ಮಾಗಡಿ ಬಳಿ ಆತ ಚಿರತೆಯೊಂದನ್ನು ಕೊಂದ ಪ್ರಸಂಗವೂ ಇಲ್ಲಿ ನಿರೂಪಿತವಾಗಿದೆ. ಅಂಡರ್ಸನ್ ಬೆಂಗಳೂರು ನಿವಾಸಿಯಾಗಿದ್ದ ಎಂಬುದೂ ಉಲ್ಲೇಖನೀಯ. ಅವನ ಈ ಕೃತಿ ಕೇವಲ ಬೇಟೆಗಾರನ ರೋಚಕ ಅನುಭವಗಳ ನಿರೂಪಣೆಯಾಗದೆ ಚಿರತೆ ಮತ್ತು ಹುಲಿಗಳ ಗುಣ ಸ್ವಭಾವ ಕುರಿತು ಆತ ನೀಡುವ ಸೂಕ್ಷ್ಮ ವಿವರಗಳು ಆತನನ್ನು ಒಬ್ಬ ಪ್ರಾಣಿವಿe್ಞÁನಿಯ ಮಟ್ಟಕ್ಕೂ ಕೊಂಡೊಯ್ಯುತ್ತವೆ. ಸುಂದರ ವನ್ಯಜೀವಿಗಳನ್ನು ಕೊಂದು, ಒಣಹುಲ್ಲು ತುಂಬಿ, ಗೊಂಬೆಗಳನ್ನು ಷೋಕೇಸಿನಲ್ಲಿ ಇಡುವುದಕ್ಕಿಂತಲೂ ಕ್ಯಾಮರಾದಲ್ಲಿ ಅವುಗಳ ಸುಂದರ ಚಿತ್ರಗಳನ್ನು ಷೂಟ್ ಮಾಡುವುದು ಅತ್ಯುತ್ತಮ ಕೆಲಸ ಎಂದು ಆತ ಅಭಿಪ್ರಾಯಪಟ್ಟಿರುವುದು ಮಾರ್ಮಿಕವಾದ, ಬೋಧಪ್ರದವಾದ ಕಿವಿಮಾತಾಗಿದೆ. ಇಂಗ್ಲಿಷಿನ ಬೆಂಗಾಳ ಊರು (ಅವರೆ ಕಾಯಿಗಳ ನಗರ) ಎಂಬುದೇ ಕನ್ನಡದಲ್ಲಿ ಬೆಂಗಳೂರು ಆಗಿದೆ ಎಂಬುದು ಅವನ ಅಭಿಪ್ರಾಯವಾಗಿದೆ. ಈ ಪ್ರದೇಶದ ಅವರೆಕಾಯಿಗಳ ರುಚಿ ಬಲ್ಲವರೇ ಬಲ್ಲರು ಎಂದೂ ಆತ ಮೆಚ್ಚಿ ಬರೆದಿದ್ದಾನೆ.
	
ಪೂರ್ಣಚಂದ್ರ ತೇಜಸ್ವಿ ಅವರು ಇದೇ ಲೇಖಕರ ಜಾಲಹಳ್ಳಿಯ ಕುರ್ಕ, ಬೆಳ್ಳಂದೂರಿನ ನರಭಕ್ಷಕ, ಪೆದ್ದಚೆರುವಿನ ರಾಕ್ಷಸ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ (1999). ಹೊಸಗನ್ನಡದಲ್ಲಿ ಮೃಗಾಯಾ ಸಾಹಿತ್ಯವನ್ನೇ ಒಂದು ಪ್ರಕಾರವೆಂಬಂತೆ ಪರಿಗಣಿಸುವಷ್ಟು ಕೃತಿ ರಚನೆ ಮಾಡಿದವರು ಕೆದಂಬಾಡಿ ಜತಪ್ಪ ರೈ ಬೇಟೆಯ ನೆನಪುಗಳು (1978), ಈಡೊಂದು ಹುಲಿಯೆರಡು (1979), ಬೇಟೆಯ ಉರುಳು (1982) ಹಾಗೂ ಬೆಟ್ಟದ ತಪ್ಪಲಿಂದ ಕಡಲ ತಡಿಗೆ - ಈ ನಾಲ್ಕು ಕೃತಿಗಳಲ್ಲಿ ಅವರು ಬೇಟೆ ಅನುಭವಗಳನ್ನು ಕುತೂಹಲ ಕೆರಳುವಂತೆ ಬರೆದಿದ್ದಾರೆ. ಬೇಟೆಯ ಉರುಳು ಎಂಬ ಕೃತಿಯಲ್ಲಿ ಆದಿಮಾನವನಿಂದ ಆಧುನಿಕನವರೆಗೆ ಬೇಟೆ ಬೆಳೆದುಬಂದ ಬಗೆಯನ್ನೂ ವಿವರಿಸಿರುವುದು ಲೇಖಕರ ಅಧ್ಯಯನಶೀಲತೆಯ ನಿದರ್ಶನವೂ ಆಗಿದ್ದು ಅಭ್ಯಾಸಿಗಳಿಗೆ ಆಕರ ಕೃತಿಯೂ ಆಗಿದೆ.
	ಕಡಿದಾಳಿನ ಕೆ.ಎಸ್.ರಾಮಪ್ಪಗೌಡರ ಮಲೆನಾಡಿನ ಶಿಕಾರಿಯ ನೆನಪುಗಳು ಸ್ವಾತಂತ್ರ್ಯ ಪೂರ್ವದ ಅವರ ಶಿಕಾರಿಯ ಅನುಭವಗಳನ್ನು ನಿರೂಪಿಸಿದರೆ, ಕೊಡಗಿನ ಸಂಪ್ರದಾಯದಂತೆ ಹುಲಿ ಮದುವೆ ಮಾಡಿಸಿಕೊಂಡ ಕಾಕೆಮಾನಿ (ಬಿ.ಡಿ.ಸುಬ್ಬಯ್ಯ) ಅವರ ಬೇಟೆ ನೆನಪು ಅಂಡಮಾನಿನಲ್ಲಿ ಅವರು ಆದಿವಾಸಿಗಳು ಬೇಟೆ ಆಡಿದ್ದನ್ನೂ ದಾಖಲಿಸುತ್ತದೆ. ಅರಣ್ಯಾಧಿಕಾರಿಯ ದಿನಚರಿ ತಮ್ಮ ಮಿತ್ರರೊಬ್ಬರ ದಿನಚರಿ ಆಧರಿಸಿದ ಬೇಟೆ ಅನುಭವಗಳ ನಿರೂಪಣೆಯಾಗಿದೆ.
	
ಕೈಂತಜೆ ವಿಷ್ಣುಭಟ್ಟರು ತಮ್ಮ ಹಾಗೂ ತಮ್ಮ ಪರಿಸರದ ಇತರರ ಬೇಟೆ ಅನುಭವಗಳನ್ನು ಬೇಟೆಯ ಸುತ್ತ ಮುತ್ತ ಎಂಬ ಕೃತಿಯಲ್ಲಿ ಸ್ವಾರಸ್ಯಕರವಾಗಿ ಬರೆದಿದ್ದರೆ, ಶಶಿಧರ ವಿಶ್ವಾಮಿತ್ರ ಅವರ ಕಡೆಯ ಚಿರತೆ ಅನ್ಯ ಬೇಟೆಗಾರರ ಅನುಭವಗಳನ್ನು ಆಧರಿಸಿ ರಚಿಸಿದ್ದಾಗಿದೆ. ನೂರಾರು ಹುಲಿ, ಕಾಡುಕೋಣ ಮೊದಲಾದವುಗಳನ್ನು ಕೊಂದು ನಿಸ್ಸೀಮರೆನಿಸಿದ್ದು ಬಡ್ಡಡ್ಕ ಅಪ್ಪಯ್ಯಗೌಡರ ಅನುಭವಗಳಿಗೆ ಪ್ರಭಾಕರ ಶಿಶಿಲರು ಶಿಕಾರಿಯ ಸೀಳುನೋಟದಲ್ಲಿ ಅಕ್ಷರರೂಪ ನೀಡಿದ್ದಾರೆ.
	
1948ರ ಹೊತ್ತಿನಲ್ಲಿ ಬೆಂಗಳೂರು ಚಾಮರಾಜಪೇಟೆಯ ಉಮಾ ಟಾಕೀಸಿನ ಬಳಿ ಚಿರತೆಯೊಂದನ್ನು ಕೊಂದ ಸಂಗತಿಯನ್ನು ಮೇಜರ್ ಎಚ್.ಸಿ.ವೇಣುಗೋಪಾಲ್ ಅವರು ತಮ್ಮ ನೆನಪು ಕೆದರಿದಾಗ ಗ್ರಂಥದ ಒಂದೆಡೆ ಪ್ರಸ್ತಾಪಿಸಿದ್ದಾರೆ. ತೋವಿನಕೆರೆ ಸೀತಾರಾಮ ಜೋಯಿಸರೂ ತಮ್ಮ ನೆನಪಿನ ಅಂಗಳದ ಒಂದು ಅಧ್ಯಾಯದಲ್ಲಿ ಗುಂಡಪ್ಪ ನಾಯಕ ಎಂಬವನ ಬೇಟೆ ಅನುಭವ ನಿರೂಪಿಸಿದ್ದಾರೆ. ಜಿ.ವೆಂಕಟಯ್ಯ ಅವರು ಬನದಸಿರಿಯಲ್ಲಿ ಬಿಳಿಗಿರಿರಂಗನಬೆಟ್ಟದ ಪರಿಸರ ಹಾಗೂ ಬೇಟೆಗೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳನ್ನು ಪ್ರಸ್ತಾಪಿಸಿದ್ದಾರೆ. ಹಾಗೆಯೇ ವೈ.ಎನ್.ಪುಟ್ಟಣ್ಣ ಅವರ ನಾನು ಕಂಡ ಮಲೆನಾಡು, ಡಿ.ಎನ್.ಕೃಷ್ಣಯ್ಯ ಅವರ ಕೊಡಗಿನ ಇತಿಹಾಸ ಕೃತಿಗಳಲ್ಲಿ ಸಹ ಬೇಟೆ ವಿಷಯಗಳು ಸಾಂದರ್ಭಿಕವಾಗಿ ಪ್ರಸ್ತಾಪವಾಗಿವೆ.
	
ಅನೇಕ ಕಥೆ, ಕಾದಂಬರಿ, ಆತ್ಮಕಥೆ, ಜೀವನ ಚಿತ್ರ, ಪ್ರಬಂಧ ಸಾಹಿತ್ಯ ಮೊದಲಾದ ಪ್ರಕಾರಗಳಲ್ಲಿಯೂ ಬೇಟೆಗೆ ಸಂಬಂಧಿಸಿದ ಸಂಗತಿಗಳು ಕಾಣಿಸಿಕೊಂಡಿವೆ. ಕುವೆಂಪು ಅವರ ಎರಡು ಕಾದಂಬರಿಗಳಾದ ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಹಾಗೂ ಮಲೆನಾಡಿನ ಚಿತ್ರಗಳು ಎಂಬ ಕೃತಿಗಳಲ್ಲಿ ಬೇಟೆಯ ದಟ್ಟ ಅನುಭಗಳು ದಾಖಲಾಗಿರುವುದನ್ನು ಗಮನಿಸಬಹುದಾಗಿದೆ. ಭಾರತೀಸುತರ ಹುಲಿಯ ಹಾಲಿನ ಮೇವು ಮೊದಲಾದ ಕೃತಿಗಳಲ್ಲಿಯೂ ಬೇಟೆಯ ಚಿತ್ರಣ ಅಲ್ಲಲ್ಲಿ ಕಂಡುಬರುತ್ತದೆ. ವನ್ಯಜೀವಿಗಳು ಪರಸ್ಪರ ನಡೆಸುವ ಬೇಟೆ ಕುರಿತ ಅನೇಕ ಕುತೂಹಲದ ಮಾಹಿತಿಗಳನ್ನು ಕುರಿತು ಬರೆದ ಆ ಮೂಲಕ ವನ್ಯಜೀವಿಗಳ ಬದುಕು ಸ್ವಭಾವದ ಮೇಲೆ ಬೆಳಕು ಚೆಲ್ಲುವ ಹಲವು ಕೃತಿಗಳೂ ಕನ್ನಡದಲ್ಲಿವೆ. ಪೂರ್ಣಚಂದ್ರ ತೇಜಸ್ವಿ (ಪರಿಸರದ ಕತೆ), ಉಲ್ಲಾಸ ಕಾರಂತ (ಕಾಡು ಪ್ರಾಣಿಗಳ ಜಾಡಿನಲ್ಲಿ), ಅಜ್ಜಂಪುರ ಕೃಷ್ಣಸ್ವಾಮಿ (ಖಗಸಿರಿ, ವನಸಿರಿ) ಮೊದಲಾದವರ ಕೃತಿಗಳನ್ನು ಇಲ್ಲಿ ಸ್ಮರಿಸಬಹುದು.
ಬೇಟೆ ಅಧ್ಯಯನಗಳು: ಸಂಸ್ಕøತಿ, ಸಾಹಿತ್ಯ ಹಾಗೂ ಪರಿಸರ ಚಿಂತನೆಯ ಹಿನ್ನೆಲೆಯಲ್ಲಿ ವಿಶೇಷ ಗಮನ ಸೆಳೆದ ಬೇಟೆಯನ್ನು ಕುರಿತು ವಿವಿಧ ನೆಲೆಯಲ್ಲಿ ಅಧ್ಯಯನ ಮಾಡುವ ಪ್ರಯತ್ನಗಳೂ ಆಧುನಿಕ ಸಂದರ್ಭದಲ್ಲಿ ಗಮನಾರ್ಹ ರೀತಿಯಲ್ಲಿ ನಡೆದಿವೆ. ಕನ್ನಡದಲ್ಲಿ ಬೇಟೆ ಸಾಹಿತ್ಯ ಎಂಬುದು ನರೇಂದ್ರ ರೈ ದೇರ್ಲ ಅವರು ಎಂ.ಫಿಲ್.ಪದವಿಗಾಗಿ ನಡೆಸಿದ ಅಧ್ಯಯನವಾಗಿದ್ದು, ಈ ವಿಷಯದ ಉತ್ತಮ ಪರಾಮರ್ಶನ ಗ್ರಂಥವಾಗಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ಬೇಟೆ: ಸಾಂಸ್ಕøತಿಕ ಪದಕೋಶ (ಸಂ.ಸ.ಚಿ.ರಮೇಶ್) ಎಂಬ ಕೃತಿ ಪ್ರಕಟಿಸಿದೆ. ಎಂ.ಪಿ.ಮಂಜಪ್ಪಶೆಟ್ಟಿ ಅವರ ಮಲೆನಾಡಿನ ಶಿಕಾರಿಗಳು ಬೇಟೆಯನ್ನೇ ಕುರಿತ ವೈವಿಧ್ಯಮಯ ಮಾಹಿತಿಗಳನ್ನೊಳಗೊಂಡ ಕೃತಿಯಾಗಿದೆ. ಕನ್ನಡ ಪುಸ್ತಕ ಪ್ರಾಧಿsಕಾರ ಪ್ರಕಟಿಸಿರುವ ಗ್ರಾಮೀಣ ಬೇಟೆಗಳು ರಾಜ್ಯದ ವಿವಿಧ ಪ್ರದೇಶಗಳ ಬೇಟೆ ತಂತ್ರ, ಪದ್ಧತಿಗಳನ್ನು ಒಳಗೊಂಡ ಕೃತಿಯಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಉಪಸಂಸ್ಕøತಿ ಮಾಲೆಯಲ್ಲಿ ಪ್ರಕಟವಾದ ಬಹಳಷ್ಟು ಕೃತಿಗಳು ಬುಡಕಟ್ಟು ಹಾಗೂ ಅಲೆಮಾರಿ ಜನಾಂಗಗಳ ಬದುಕು ಮತ್ತು ಸಂಸ್ಕøತಿಯ ಅಧ್ಯಯನಗಳಾಗಿದ್ದು ಅವುಗಳಲ್ಲಿ ಅವರ ಜೀವನ ವಿಧಾನವೂ ಆದ ಬೇಟೆಯ ಬಗೆಗೂ ಮಾಹಿತಿಗಳು ಲಭ್ಯವಾಗುತ್ತವೆ. ಬಿ.ಪಿ.ರಾಮಯ್ಯ, ಎಂ.ಎಲ್.ಶಂಕರಲಿಂಗಪ್ಪ, ಟಿ.ಗೋವಿಂದರಾಜು ಮೊದಲಾದವರ ಬೇಟೆ ಕುರಿತ ಬಿಡಿ ಲೇಖನಗಳು ವಿವಿಧ ಪತ್ರಿಕೆಗಳಲ್ಲಿಯೂ ಸಂಸ್ಮರಣ ಗ್ರಂಥಗಳಲ್ಲಿಯೂ ಪ್ರಕಟವಾಗಿವೆ. ಕಾನೂನು ಬಾಹಿರ ಬೇಟೆ ಆಚರಣೆ ಬಗೆಗೆ ಜನತೆಯಲ್ಲಿ ಜಾಗೃತಿ ಮೂಡಿಸುವಂತಹ ಚಿತ್ರ ಲೇಖನಗಳು ಸಾಮಾನ್ಯವಾಗಿ ನಿಯತಕಾಲಿಕಗಳಲ್ಲಿ ಬೇಟೆ ಋತುವಿನಲ್ಲಿ ಪ್ರಕಟವಾಗುವುದು ಹೊಸ ಬೆಳೆವಣಿಗೆಯಾಗಿದೆ.		 									(ಟಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ